ಆಲ್ಬಟ್ರಾಸ್
	ಸಮುದ್ರವಲಯವಾಸಿಯಾದ ಒಂದು ಹಕ್ಕಿ, ಗಾತ್ರದಲ್ಲಿ ಬಲು ದೊಡ್ಡದು. ಹೆಚ್ಚಿನ ಹಾರುವ ಸಾಮಥ್ರ್ಯವುಳ್ಳದ್ದು. ಡಯೆಮಿಡೈಡ ಕುಟುಂಬದ ಇದರ ಜಾತಿಯಲ್ಲಿ 13 ಪ್ರಬೇಧಗಳಿವೆ. ಇವುಗಳ ವೈಶಿಷ್ಟ್ಯ-ದೊಡ್ಡತಲೆ, ದಪ್ಪದೇಹ, ಬಲು ಉದ್ದ ಮತ್ತು ಕಡಿಮೆ ಅಗಲದ ರೆಕ್ಕೆಗಳು, ಚಿಕ್ಕ ಬಾಲ, ಬಲು ದಪ್ಪವಾಗಿ ಕೊಕ್ಕೆಯಂತೆ ಬಾಗಿರುವಕೊಕ್ಕು, ಕೊಕ್ಕನ್ನು ಆವರಿಸಿರುವ ಕೊಂಬಿನ ಫಲಕ, ಮೇಲು ಕೊಕ್ಕಿನ ಉಭಯ ಪಾಶ್ರ್ವಗಳಲ್ಲಿ ನಳಿಗೆಯಾಕಾರದ ಹೊಳ್ಳೆಗಳು. ಗಿಡ್ಡ ಕಾಲುಗಳು ಜಾಲಪಾದಗಳು; ಬೆಳೆದ ಪಕ್ಷಿಯ ಭಾರ ಸುಮಾರು 25 ಪೌಂಡ್. ರೆಕ್ಕೆಗಳನ್ನು ಬಿಡಿಸಿದಾಗ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಸುಮಾರು 111/2 ಅಡಿ ಉದ್ದ. ಆಲ್ಬಟ್ರಾಸ್ ಆಯುಷ್ಯದ ಅಧಿಕಭಾಗವನ್ನು ಸಮುದ್ರಗಳ ಎತ್ತರದಲ್ಲಿ ತೇಲುತ್ತ ಕಳೆಯುತ್ತದೆ. ತೆರೆದ ದೊಡ್ಡ ರೆಕ್ಕೆಗಳಿಂದ ಗಂಟೆಗಟ್ಟಲೆ ನಿಶ್ಚಲವಾಗಿ ನಿಲ್ಲಬಲ್ಲ ಅಥವಾ ಸಮುದ್ರಗಾಮಿ ಹಡಗನ್ನು ಒಂದೇ ಎತ್ತರದಲ್ಲಿ ಆ ಹಡಗಿನ ಒಂದು ಅಂಶವೋ ಎಂಬಂತೆ ಹಿಂಬಾಲಿಸಬಲ್ಲ ಈ ಹಕ್ಕಿ ಕಡಲವಲಯದ ಮಹಾದ್ಭುತಗಳಲ್ಲೊಂದು. ನೀರಿನ ರಾಶಿಯ ಮಧ್ಯೆ ನೆಲಕಂಡೇವೇ ನಾಗರಿಕತೆಯ ಸುಳುವು ದೊರೆತೀತೇ ಎಂಬ ಹಂಬಲಿಕೆಯಿಂದ ಸಾಗುವ ನಾವಿಕರಿಗೆ ಎತ್ತರದ ಈ ಒಡನಾಡಿ ಶುಭಸಂಕೇತವೂ ಹೌದು, ಮೌನಸಹಗಾಮಿಯೂ ಹೌದು. ಈ ಕಾರಣದಿಂದ ಪ್ರಾಚೀನ ನಾವಿಕರಲ್ಲಿ ಆಲ್ಬಟ್ರಾಸನ್ನು ಕೊಲ್ಲತಕ್ಕದ್ದಲ್ಲ ಎಂಬ ಒಂದು ಸತ್ಸಂಪ್ರದಾಯ ಬೆಳೆದು ಬಂದಿತ್ತು. ಕೋಲ್‍ರಿಜ್ ಕವಿ ಎನ್ಯಂಟ್ ಮ್ಯಾರಿನರ್ ಎಂಬ ಕವನದಲ್ಲಿ ಈ ಆಲ್ಬಟ್ರಾಸ್ ಪ್ರತಿಮೆಯನ್ನು ಸುಂದರವಾಗಿ ಬಳಸಿದ್ದಾನೆ. 

	ಆಲ್ಬಟ್ರಾಸ್ ಹಕ್ಕಿಗಳು ಸಾಮಾನ್ಯವಾಗಿ 300 ದ. ಅಕ್ಷಾಂಶದಿಂದ ಅಂಟಾರ್ಕ್‍ಟಿಕದವರೆಗಿನ ದಕ್ಷಿಣ ಸಮುದ್ರಗಳಲ್ಲೂ ಉತ್ತರ ಪೆಸಿಫಿಕ್ ಸಾಗರದಲ್ಲಿ ಬೇರಿಂಗ್ ಸಮುದ್ರಗಳಲ್ಲಿಯೂ ಹೆಚ್ಚಾಗಿವೆ. ಸಂತಾನವೃದ್ಧಿಯ ಕಾಲವನ್ನು ಬಿಟ್ಟು ಉಳಿದ ವೇಳೆಯೆಲ್ಲ ಸಮುದ್ರದ ಎತ್ತರದ ಗಾಳಿಯ ತರಂಗ ಸಂಸ್ತರಗಳ ನಡುವೆಯೇ ಇವುಗಳ ವಾಸ. ಎಂಥ ಚಂಡಮಾರುತ ಬೀಸುವಾಗಲೂ ಸುಂಟರಗಾಳಿಗಳು ಸುತ್ತುತ್ತಿರುವಾಗಲೂ ಆಲ್ಬಟ್ರಾಸ್‍ಗಳು ಘಾತಿಗೊಳ್ಳದೆ ಬಲು ಚಳಕದಿಂದ ತೇಲುತ್ತಿರುತ್ತವೆ. ಇವು ಸಂಚರಿಸುವ ದೊರ ಊಹೆಗೆ ಮೀರಿದ್ದು. ಇದರ ಪರೀಕ್ಷೆ ಮಾಡಲು ಹಕ್ಕಿಗಳನ್ನು ಸೆರೆಹಿಡಿದು ಅವುಗಳ ಮೈಗೆ ಗುರುತುಮಾಡಿದ ಫಲಕಗಳನ್ನು ಜೋಡಿಸಿ ವಿಮಾನಗಳಲ್ಲಿ ಸಾವಿರಾರು ಕಿ.ಮೀ. ದೂರ ತೆಗೆದುಕೊಂಡುಹೋಗಿ ಬಿಡುಗಡೆ ಮಾಡಿದರು. ಆದರೆ ಹಕ್ಕಿಗಳಿಗೆ ದಿಕ್ಕು ತಪ್ಪಲಿಲ್ಲ. ಮೊದಲ ಆಸರೆಯ ವಾಸನೆ ಮರೆಯಲಿಲ್ಲ. 12 ದಿವಸಗಳಲ್ಲಿ ಸುಮಾರು 5040 ಕಿ.ಮೀ.ಗಳನ್ನು ಒಂದು ಹಕ್ಕಿ ಹಾರಿ ಅದರ ಪೂರ್ವಕ್ಷೇತ್ರವನ್ನು ತಲುಪಿದ್ದರೆ ಇನ್ನೊಂದು ಹಕ್ಕಿ 5120 ಕಿ.ಮೀ.ಗಳನ್ನು ಕೇವಲ 10 ದಿವಸಗಳಲ್ಲಿ ಗಮಿಸಿತ್ತು. 9600 ಕಿ.ಮೀ. ಹಾರಿದ ಆಲ್ಬಟ್ರಾಸನ್ನು ಗುರುತಿಸಲಾಗಿದೆ. 

	ಗಂಡು ಹೆಣ್ಣು ಆಲ್ಬಟ್ರಾಸ್‍ಗಳೆರಡೂ ಸಂತಾನವೃದ್ಧಿಕಾಲದಲ್ಲಿ ನೆಲದೆಡೆಗೆ ಸಾಗುತ್ತವೆ. ಅವುಗಳ ಪ್ರಣಯವಿನ್ಯಾಸಗಳು, ಭಾವಪ್ರಕಟಣೆ ಎಲ್ಲವೂ ವಿಚಿತ್ರ. ಮಧುಋತು ಸೆಪ್ಟೆಂಬರಿನಿಂದ ಫೆಬ್ರವರಿವರೆಗೆ, ಮೇ ಜೊನ್ ತಿಂಗಳು ಮೊಟ್ಟೆಯಿಡುವ ಕಾಲ. ಅಗಮ್ಯ ಪ್ರದೇಶಗಳಲ್ಲಿ ನೆಲದ ಮೇಲಿನ ಗುಳಿಯಲ್ಲಿಯೋ ಕಿರಿದೆತ್ತರದ ಹುಲ್ಲುಪೊದೆಯಲ್ಲಿಯೋ ಮೊಟ್ಟೆಗಳನ್ನು ಎಚ್ಚರದಿಂದ ಇಡುತ್ತವೆ. ಒಂದು ಗರ್ಭಸ್ಥ ಹೆಣ್ಣು ಹಕ್ಕಿ ಒಂದು ಋತುವಿನಲ್ಲಿ ಒಂದೇ ಮೊಟ್ಟೆಯನ್ನು ಇಡುವುದು. ಸುಮಾರು 6 ಕೋಳಿಮೊಟ್ಟೆಗಳ ಒಟ್ಟು ಘನಗಾತ್ರದಷ್ಟು ದೊಡ್ಡದು, ಈ ಒಂದು ಮೊಟ್ಟೆ, ಬಣ್ಣ ಸಾಮಾನ್ಯವಾಗಿ ಬಿಳಿ. ಒಮ್ಮೊಮ್ಮೆ ಕಂದು ಮಚ್ಚೆಗಳೂ ಇರುವುದುಂಟು; ಮುಟ್ಟಲು ಚಾಕ್‍ನಂತೆ ದೊರಗು. ತಂದೆ ತಾಯಿ ಹಕ್ಕಿಗಳೆರಡೂ ಸರತಿ ಮೇಲೆ ತಮ್ಮ ಭಾವೀ ಸಂತತಿಯ ಮೇಲೆ ಕಾವು ಕೂರುತ್ತವೆ. ಇದರ ಆವಧಿ 70-80 ದಿವಸಗಳು. ಮುಂದೆ ತತ್ತಿ ಒಡೆದು ಹೊರಬರುವ ಸುಂದರ ಶ್ವೇತ ಮರಿ ಆಲ್ಬಟ್ರಾಸ್ ತಂದೆ ತಾಯಿಯರನ್ನೇ ಆಶ್ರಯಿಸಿ ಜೀವನದ ಹೆಜ್ಜೆಗಳನ್ನು ಕಲಿಯುತ್ತದೆ. ಇದು ಎಂಟು ತಿಂಗಳ ಕಾಲವೇ ನಡೆಯಬಹುದು. ಆ ಹೊತ್ತಿಗೆ ಸಂಗಾತಿಗಳಿಂದ, ಮಹಾ ಸಮುದ್ರಗಳಿಂದ ಸಾಕಷ್ಟು ದೀರ್ಘಕಾಲ ದೂರವಿದ್ದ ತಂದೆತಾಯಿ ಹಕ್ಕಿಗಳು ಮರಿಯ ವ್ಯಾಮೋಹ ತೊರೆದು ಮಹಾವೈಶಾಲ್ಯಕ್ಕೆ ನೆಗೆದು ಮಾಯವಾಗುತ್ತವೆ. ಇನ್ನು ನಿರ್ವಾಹಕವಿಲ್ಲದೆ ಮರಿ ಸ್ವತಂತ್ರವಾಗಿ ಹಿರಿಯರ ಜಾಡನ್ನು ಅರಸಿ ಸಾಗುತ್ತದೆ ಆಲ್ಬಟ್ರಾಸ್‍ಗಳ ಸಂತಾನವೃದ್ಧಿ ಅವಧಿ ಸುಮಾರು 2 ವರ್ಷಗಳು. 

	ಇವುಗಳ ಆಹಾರ ಕಿರಿಯ ಜಲಚರಗಳು. ವಿಶೇಷವಾಗಿ ಮೀನು. ಸಮುದ್ರದ ಉಪ್ಪುನೀರನ್ನು ಅವು ಯಥೇಚ್ಛವಾಗಿ ಹೀರಿ ಸಂಗ್ರಹವಾದ ಅನಾವಶ್ಯಕ ಉಪ್ಪನ್ನು ಹೊಳ್ಳೆಯ ಗ್ರಂಥಿಗಳಿಂದ ವಿಸರ್ಜಿಸುತ್ತವೆ. 

	ಎಲ್ಲ ಪ್ರಾಣಿಗಳಂತೆಯೆ ಆಲ್ಬಟ್ರಾಸ್‍ಗಳ ಮಹಾ ಮತ್ತು ಪ್ರಥಮ ಶತ್ರು ಮನುಷ್ಯ. ಎಡೆತಡೆಯಿಲ್ಲದ ಹತ್ಯಾಕಾಂಡದಿಂದ ಕೆಲವು ಪ್ರಬೇಧಗಳು ನಿರ್ನಾಮವಾಗಿ ಹೋಗಿವೆ. 						
(ಜಿ.ಎಂ.ಬಿ.)
										(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ